ಪೇಟ್ಯಾನ್, ಹೆನ್ರಿ ಫಿಲಿಪ್
1856-1951. ಫ್ರೆಂಚ್ ಯೋಧ. ಸೇನಾನಿ, ಮಾರ್ಷಲ್, 1940ರಿಂದ 1944ರವರೆಗೆ ಅನಾಕ್ರಮಿತ ಫ್ರಾನ್ಸಿನ ಪ್ರಧಾನಿಯಾಗಿದ್ದ. ಪಾಡ್-ಕಾಲೇನ ಕಾಚಿ-ಅ-ಲಾ-ಟೂರ್‍ನಲ್ಲಿ 1856ರ ಏಪ್ರಿಲ್ 24 ರಂದು ಜನಿಸಿದ. ಸ್ಯಾನ್-ಸಿರ್ ಮತ್ತು ಇಕೋಲ್ ಡಿ ಗ್ವೆರ್‍ಗಳಲ್ಲಿ ಸೈನಿಕ ತರಬೇತಿ ಪಡೆದ ಈತ 1914ರವರೆಗೆ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ. 1914ರಲ್ಲಿ ಒಂದನೆಯ ಮಹಾಯುದ್ಧ ಆರಂಭವಾದಾಗ ಈತನಿಗೆ ಐವತ್ತೆಂಟು ವರ್ಷ ವಯಸ್ಸಾಗಿತ್ತು. ಅದಕ್ಕೆ ಮೊದಲು ಈತ ಫ್ರಾನ್ಸಿನ ಹೊರಗಡೆ ಎಲ್ಲೂ ಸೇವೆ ಸಲ್ಲಿಸಿರಲಿಲ್ಲ. ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ಆದಾಗ್ಯೂ ಯುದ್ಧದ ಬಗ್ಗೆ ಅಂದು ಪ್ರಚಲಿತವಿದ್ದ ವಾದಗಳಲ್ಲಿ ಇವನು ಭಾಗವಹಿಸಿ ತನ್ನದೇ ವಿಶಿಷ್ಟ ಭಾವನೆಗಳನ್ನು ಪ್ರಚುರಪಡಿಸಿದ. ಫಿರಂಗಿ ದಳದ ಬೆಂಬಲದೊಂದಿಗೆ ಸಜ್ಜಾದ ಕಾಲ್ದಳದ ನೆರವಿನೊಂದಿಗೆ ರಕ್ಷಣಾತ್ಮಕ ಸಮರೋಪಾಯ ಅನುಸರಿಸುವುದೇ ಸರಿಯೆಂದು ವಾದಿಸುತ್ತಿದ್ದ. ಒಂದನೆಯ ಮಹಾಯುದ್ಧದಲ್ಲಿ ಫ್ರಾನ್ಸಿಗೆ ಆದ ಅನುಭವದ ದೃಷ್ಟಿಯಿಂದ ಈ ವಾದ ಸರಿಯೆಂಬುದು ಸ್ಪಷ್ಟವಾಯಿತು.

ಪೇಟ್ಯಾನ್ 1914ರಲ್ಲಿ ಕಾಲ್ದಳವೊಂದನ್ನು ನಡೆಸಲು ನೇಮಕಗೊಂಡ. ಇವನು ದಕ್ಷನೆಂದು ಹೆಸರು ಗಳಿಸಿದ. 1915ರಲ್ಲಿ ಇವನು ಜನರಲ್ ದರ್ಜೆಗೆ ಏರಿದ. ಜರ್ಮನರ ವಿರುದ್ಧ ಇವನು ನಡೆಸಿದ ಕಾರ್ಯಾಚರಣೆಯಲ್ಲಿ ಗೆಲುವು ಲಭಿಸಿತು. ಇವನೊಬ್ಬ ವೀರನೆನಿಸಿದ. 1917ರಲ್ಲಿ ಇವನು ಮಹಾದಂಡನಾಯಕ ಪಟ್ಟಕ್ಕೇರಿದ. ಫ್ರಾನ್ಸಿನ ಕಳೆದು ಹೋಗಿದ್ದ ಸ್ಥೈರ್ಯವನ್ನು ಪುನಃ ಸ್ಥಾಪಿಸುವ ಹೊಣೆ ಇವನದಾಯಿತು. ಜರ್ಮನರ ವಿರುದ್ಧ ಅಂತಿಮ ಹೋರಾಟ ನಡೆಸಲು ಇವನು ಸೈನ್ಯವನ್ನು ಸಜ್ಜುಗೊಳಿಸಿದ. 1918ರ ಮಾರ್ಚ್ ಅನಂತರ ಮಿತ್ರಸೇನೆಗಳ ಸಂಘಟನೆಯ ವ್ಯವಸ್ಥೆ ಜಾರಿಗೆ ಬಂದಾಗ ಫ್ರೆಂಚ್ ಸೈನ್ಯಗಳ ಆಕ್ರಮಣ ಕಾರ್ಯಕ್ಕೆ ಇವನು ನೇತಾರನಾಗಿದ್ದ. ಆಗ ಕೆಲವು ಅದ್ಭುತ ವಿಜಯಗಳನ್ನು ಸಾಧಿಸಿದ.

1918ರಲ್ಲಿ ಇವನಿಗೆ ಮಾರ್ಷಲ್ ಪದವಿ ದೊರಕಿತು. ಜರ್ಮನರನ್ನು ವಾರ್ಡನ್ ಬಳಿ ತಡೆದ ವೀರನೆಂದು ಇವನು ಜನಪ್ರಿಯನಾದ. 1920ರಲ್ಲಿ ಈತ ಪರಮೋಚ್ಚ ಯುದ್ಧ ಮಂಡಲಿಯ ಉಪಾಧ್ಯಕ್ಷನಾಗಿಯೂ 1922ರಲ್ಲಿ ಸೈನ್ಯದ ಮಹಾನಿರೀಕ್ಷಕನೂ ಆಗಿ ನೇಮಕ ಹೊಂದಿದ.

1931ರಲ್ಲಿ ಪೇಟ್ಯಾನ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ. 1934ರಲ್ಲಿ ಇವನು ಯುದ್ಧ ಮಂತ್ರಿಯಾಗಿ ಫ್ರೆಂಚ್ ಸೈನ್ಯವನ್ನು ಆಧುನೀಕರಿಸಲು ಯತ್ನಿಸಿದ. 1939-40ರಲ್ಲಿ ಪೇಟ್ಯಾನ್ ಸ್ಪೇನಿನಲ್ಲಿ ರಾಯಭಾರಿಯಾಗಿದ್ದ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನ್ ಆಕ್ರಮಣದ ವಿರುದ್ಧ ಫ್ರಾನ್ಸ್ ಪತನ ಹೊಂದುವ ಸ್ಥಿತಿಯಲ್ಲಿದ್ದಾಗ ಇವನು ಫ್ರಾನ್ಸಿನ ಪ್ರಧಾನಿಯಾಗಿ ಜರ್ಮನಿಯೊಂದಿಗೆ ಶಾಂತಿಯ ಒಪ್ಪಂದ ಮಾಡಿಕೊಂಡ (1940). ಪಾರ್ಲಿಮೆಂಟು ಗಣರಾಜ್ಯ ಸಂವಿಧಾನವನ್ನು ನಿಲಂಬನಗೊಳಿಸಿತು. ಪೇಟ್ಯಾನ್ ಫ್ರಾನ್ಸಿನ ಮುಖ್ಯನಾದ. ವಿಷೀ ಎಂಬುದು ಇವನ ಸರ್ಕಾರದ ಆಡಳಿತ ಕೇಂದ್ರವಾಯಿತು. 1942ರಲ್ಲಿ ಲಾವಲ್ ಪ್ರಬಲನಾದಾಗ ಪೇಟ್ಯಾನ್ ನಾಮಮಾತ್ರಕ್ಕೆ ಮುಖ್ಯನಾಗಿ ಉಳಿದ. ಮಿತ್ರರಾಷ್ಟ್ರಗಳು ಫ್ರಾನ್ಸನ್ನು ಜರ್ಮನ್ ಆಕ್ರಮಣದಿಂದ ವಿಮೋಚನೆಗೊಳಿಸಿದಾಗ ಪೇಟ್ಯಾನನನ್ನು ದೇಶದ್ರೋಹದ ಆಪಾದನೆಯ ಮೇಲೆ ದಸ್ತಗಿರಿ ಮಾಡಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು (1945). ಪೇಟ್ಯಾನ್ ದೇಶದ್ರೋಹಿ ಎಂದು ತೀರ್ಪಾಗಿ ಅವನಿಗೆ ಮರಣ ದಂಡನೆ ವಿಧಿಸಲಾಯಿತಾದರೂ ಅನಂತರ ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು. ಪೇಟ್ಯಾನ್ 1951ರಲ್ಲಿ ತೀರಿಕೊಂಡ. 

ಪೇಟ್ಯಾನ್ ವಿವಾದಾಸ್ಪದ ವ್ಯಕ್ತಿ. ಕೆಲವರು ಅವನನ್ನು ದೇಶದ್ರೋಹಿಯೆಂದೂ ಮತ್ತೆ ಕೆಲವರು ದೇಶದ ಹಿತದೃಷ್ಟಿಯಿಂದ ತನ್ನನ್ನೇ ತಾನು ತ್ಯಾಗ ಮಾಡಿಕೊಂಡ ದೇಶಾಭಿಮಾನಿ ಎಂದೂ ಪರಿಗಣಿಸಿದ್ದಾರೆ.
(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ